ಅಡಿವರಸೆ
	
ಗೋಡೆ ಮೊದಲಾದುವುಗಳ ತಳದಲ್ಲಿ ಮುಂದಕ್ಕೆ ಚಾಚಿಕೊಂಡಿರುವ ವರಸೆಗೆ ಈ ಹೆಸರಿದೆ. ಕಟ್ಟಡದ ಗೋಡೆಯನ್ನು ಕಟ್ಟುವಾಗ ಗಟ್ಟಿಯಾದ ಅಡಿಪಾಯ ಸಿಕ್ಕುವವರೆಗೂ ಅಗೆಯುತ್ತಾರಷ್ಟೆ. ಅಡಿಪಾಯದಲ್ಲಿ ಎಲ್ಲ ಕಡೆಗಳಲ್ಲೂ ಕಲ್ಲನ್ನು ನಿರೀಕ್ಷಿಸಲಾಗುವುದಿಲ್ಲ. ಸಾಮಾನ್ಯವಾದ ಅಡಿಪಾಯದ ಮಣ್ಣು ಒಂದು ಚದರಡಿಯ ಮೇಲೆ ಇಟ್ಟಿಗೆಗೋಡೆ ಹೊರುವಷ್ಟು ಭಾರವನ್ನು ಹೊರಲಾರದು. ಅದಕ್ಕಾಗಿ ಮಹಡಿಯ ಮನೆಯ 1 1/2 ದಪ್ಪದ ಇಟ್ಟಿಗೆ ಗೋಡೆಯ ಅಡಿಪಾಯ 4' ವರೆಗೂ ಅಗಲವಾಗಿರಬೇಕಾಗುತ್ತದೆ. ತಳಪಾಯದಲ್ಲಿ 6"-9" ವರೆಗೂ ಕಾಂಕ್ರೀಟನ್ನು ತುಂಬುತ್ತಾರೆ. ನೆಲಮಟ್ಟದ ಕೆಳಗಿರುವ ಗೋಡೆಯ ಭಾಗವನ್ನು ಮೇಲ್ಪಾಯ (ಬೇಸ್ ಮೆಂಟ್) ಎನ್ನುತ್ತಾರೆ. ಮೇಲ್ಪಾಯದ ಕೆಳಗಡೆ ತಳಪಾಯದ ಕಾಂಕ್ರೀಟಿನ ಮೇಲಿನ ಮಟ್ಟದವರೆಗೂ ಇರುವ ಕಲ್ಲುಗಾರೆಯ ಕಟ್ಟಡವೇ ಅಡಿವರಸೆ. ಈಗ ಮೇಲ್ಪಾಯದ ಅಗಲ 2' ಇದ್ದು ಅಡಿಪಾಯದ ಕಾಂಕ್ರೀಟಿನ ಅಗಲ 4' ಆಗಿದ್ದರೆ ಕಲ್ಲು ಗಾರೆಯಿಂದ ಎರಡು ಅಡಿವರಸೆಗಳನ್ನು 2 1/2 ಅಗಲವಾಗಿಯೂ ಇನ್ನೆರಡು ಅಡಿವರಸೆಗಳನ್ನು 3' ಅಗಲವಾಗಿಯೂ ಕಟ್ಟಿ ಕೆಳಗಡೆ ಕಾಂಕ್ರೀಟ್ ಒಂದೊಂದು ಕಡೆಯಲ್ಲಿಯೂ 6" ಹೊರಚಾಚುವ ಹಾಗೆ ಮಾಡಬಹುದು. ಆಗ ಗೋಡೆಯ ಮೇಲೆ ಬರುವ ಭಾರ ಅಡಿವರಸೆಗಳ ಮೂಲಕ ಅಡಿಪಾಯದ ಮೇಲೆ ಅದರ ಶಕ್ತಿಗೆ ತಕ್ಕಂತೆ ಹರಡುವುದು ಸಾಧ್ಯವಾಗುತ್ತದೆ.										

(ಎಚ್.ಸಿ.ಕೆ.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ